ಬಹಾಮಸ್
	ಉತ್ತರ ಅಟ್ಲಾಂಟಿಕ್ ಸಾಗರದ ಪಶ್ಚಿಮದಲ್ಲಿರುವ ಸುಮಾರು 3000 ಸಣ್ಣಪುಟ್ಟ ಹವಳ ದ್ವೀಪಗಳ ಸಮೂಹ. ಫ್ಲಾರಿಡದ ಪೂರ್ವತೀರದಿಂದ 80 ಕಿ.ಮೀ ದೂರದಲ್ಲಿದೆ ಉಅ.20º50-27º 25 ಮತ್ತು ಪ ರೇ 72º 37-80º 30 ನಡುವೆ ಕ್ಯೂಬದ ಈಶಾನ್ಯ ದಿಕ್ಕಿನವರೆಗೆ 800 ಕಿಮೀ ವ್ಯಾಪ್ತಿಯಲ್ಲಿ ಹರಡಿದೆ. ಸುಮರು 20 ದ್ವೀಪಗಳಲ್ಲಿ ಮಾತ್ರ ಜನವಸತಿ. ಗ್ರೇಟ್ ಅಬಕೊ, ಐಲೂತರ, ಅಂಡ್ರಸ್, ಸಾನ್ ಸಾಲ್ವಡಾರ್, ಗ್ರಾಂಡ್ ಬಹಾಮ, ನ್ಯೂಪ್ರಾವಿಡೆನ್ಸ್, ಗ್ರೇಟ್ ಇಕ್ಸೂಮ, ಲಾಂಗ್ ಐಲ್ಯಾಂಡ್, ಕ್ಯಾಟ್ ಐಲ್ಯಾಂಡ್, ಅಕ್ಲಿನ್ಸ್, ಮೇಗ್ವಾನ ಮತ್ತು ಇನಾಗ್ವ ಮುಖ್ಯ ದ್ವೀಪಗಳು. ಈ ಪೈಕಿ ನ್ಯೂ ಪ್ರಾವಿಡೆನ್ಸ್ ಮತ್ತು ಗ್ರಾಂಡ್ ಬಹಾಮ ದ್ವೀಪಗಳಲ್ಲಿ ಒಟ್ಟು ಜನಸಂಖ್ಯೆಯ ಐದನೆಯ ನಾಲ್ಕು ಭಾಗ ದಟ್ಟೈಸಿದೆ. ಒಟ್ಟು ವಿಸ್ತೀರ್ಣ 13.939 ಚ.ಕಿಮೀ. ಜನಸಂಖ್ಯೆ 2,95,000ಚ.ಕಿ.ಮೀ. (2000). ರಾಜಧಾನಿ ನಾಸೊ.

	ಹಿತಕರ ವಾಯುಗೂಣ ಈ ದ್ವೀಪಗಳ ಒಂದು ಮುಖ್ಯ ಅಕರ್ಷಣೆ. ಸಾಮಾನ್ಯ ವರ್ಷದ ಸರಾಸರಿ ವಾಯುಗುಣ ಚಳಿಗಾಲದಲ್ಲಿ 22ºಅ ಬೇಸಿಗೆ ಕಾಲದಲ್ಲಿ 29ºಅ ವರ್ಷದ ಸರಾಸರಿ ಮಳೆ ಸುಮರು 114 ಸೆಂಮೀ. ಸಣ್ಣಕಲ್ಲುಗಳ ತೆಳುಪದರದ ಮೇಲ್ಮೈ. ಹೀಗಾಗಿ ಈ ದ್ವೀಪಗಳ ನೆಲ ಫಲವತ್ತಾಗಿಲ್ಲ. ಅನೇಕ ದ್ವೀಪಗಳಲ್ಲಿ ಪೀತದಾರು ಮರಗಳ ಕಾಡುಗಳಿವೆ. ಬಾಳೆಹಣ್ಣು, ಅನನಸ್, ಟೊಮೇಟೊ, ಜಂಬೀರ ಜಾತಿಯ ವಿವಿಧ ಫಲಗಳು, ಸೌತೇಕಾಯಿ ಇಲ್ಲಿಯ ಮುಖ್ಯ ಬೆಳಸುಗಳು. ದ್ವೀಪದ ಜನರಿಗೆ ಬೇಕಾಗುವ ಅಹಾರ, ಮಾಂಸ ಇತ್ಯಾದಿಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಾರೆ. ಒಟ್ಟು 2,543 ಕಿಮೀ ಉದ್ದದ ಕಡಲ ತೀರವನ್ನೊಳಗೊಂಡಿದ್ದು ಮೀನುಗಾರಿಕೆ ಇಲ್ಲಿಯ ಮುಖ್ಯ ಉದ್ಯಮವಾಗಿದೆ. ವಿವಿಧ ಬಗೆಯ ಮೀನುಗಳನ್ನು ಹಿಡಿದು ರಫ್ತು ಮಾಡುತ್ತಾರೆ.

	ಬಹಾಮಸಿನ ಕೈಗಾರಿಕೆಯಲ್ಲಿ ಸಿಮೆಂಟ್ ತಯಾರಿಕೆ, ಪೆಟ್ರೋಲ್ ಶುದ್ಧೀಕರಣ, ರಮ್ ತಯಾರಿಕೆ ಮತ್ತು ಅಹಾರ ಸಂಸ್ಕರಣೆ ಮುಖ್ಯವಾದವು. ಔಷಧ ವಸ್ತುಗಳ ಮತ್ತು ವಿವಿಧ ಪಾನೀಯಗಳ ತಯಾರಿಕೆ ಉಂಟು. ಇವನ್ನೆಲ್ಲ ಅಮೆರಿಕ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್, ಕೆನಡ, ದಿ ನೆದರ್ಲೆಂಡ್ಸ್ ಮತ್ತು ಪೋರ್ಟೊರಿಕೊಗಳಿಗೆ ರಫ್ತುಮಾಡುತ್ತಾರೆ. ಕಚ್ಚಾ ಪೆಟ್ರೋಲ್, ವಿವಿಧ ವಿದ್ಯುತ್ ಯಂತ್ರಗಳು, ಇತರ ಉಪಕರಣಗಳು, ಮಾಂಸ, ಮಾಸೋತ್ಪನ್ನಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್, ನೈಜೀರಿಯ ಮತ್ತು ಇಟಲಿಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಬಹಾಮಸಿನ ಆರ್ಥಿಕ ಮೂಲೋತ್ಪನ್ನದಲ್ಲಿ ಪ್ರವಾಸೋದ್ಯಮ ಮುಖ್ಯವಾದದ್ದು. ಇದನ್ನು ಅವಲಂಬಿಸಿ ಅನೇಕ ಹೋಟೆಲು ಮತ್ತು ಬ್ಯಾಂಕ್ ಉದ್ಯಮಗಳಿವೆ. ಇವು ಇಲ್ಲಿಯ ಜನರಿಗೆ ಉದ್ಯೋಗ ಕೇಂದ್ರಗಳಾಗಿವೆ. ಪ್ರತಿ ವರ್ಷ ಸುಮಾರು 1.25 ಮಿಲಿಯನ್ ಪ್ರವಾಸಿಗಳು ಬಹಾಮಸಿಗೆ ಭೇಟಿಕೊಡುವುದುಂಟು. ಸುಮಾರು 1600 ಕಿಮೀ ಉದದ್ದ ರಸ್ತೆಗಳಿವೆ. ಇವು ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸಿವೆ. ಇಲ್ಲಿಯ ವಿವಿಧ ಬಗೆಯ ದೋಣಿ ಮತ್ತು ಹಡಗುಗಳು ದ್ವೀಪಗಳ ಮಧ್ಯೆ ಓಡಾಡುವುದಲ್ಲದೆ ಇತರ ದೇಶಗಳ ಜೊತೆ ಸಂರ್ಪಕವನ್ನೂ ಇಟ್ಟುಕೊಂಡಿವೆ. ನಾಸೊ ಪ್ರಮುಖ ಬಂದರು, ಜೊತೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ. 

	ಇಲ್ಲಿಯ ಶೇಕಡಾ 90 ಮಂದಿ ಓದು ಬರಹ ಬಲ್ಲವರು. 5 ವರ್ಷದಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಅಂಚೆ, ತಂತಿ, ದೂರವಾಣಿ ಮತ್ತು ವೈದ್ಯಕೀಯ ಸೌಲಭ್ಯಗಳುಂಟು. ಬಹಾಮಸಿನ ಒಟ್ಟು ಜನಸಂಖ್ಯೆಯಲ್ಲಿ ಐದನೆಯ ನಾಲ್ಕರಷ್ಟು ನೀಗ್ರೊಗಳು. ಉಳಿದವರಲ್ಲಿ ಬಿಳಿಯರೂ ಕಪ್ಪು ಬಿಳಿ ಜನಾಂಗದ ಮಿಶ್ರ ಸಂತತಿಯವರೂ ಇದ್ದಾರೆ.

	ಕ್ರಿಸ್ಟೋಫರ್ ಕೊಲಂಬಸ್ 1492ರಲ್ಲಿ ಸಾನ್‍ಸಾಲ್ವಡಾರಿನಲ್ಲಿ ಇಳಿದು ಅದು ಸ್ಪೇನಿಗೆ ಸೇರಿದ್ದೆಂದು ಘೋಷಿಸಿದ. ಆದರೆ ಸ್ಪಾನಿಷರು ಅಲ್ಲಿ ನೆಲಸದೆ ಅಲ್ಲಿದ್ದ ಲುಕಾಯೊ ಇಂಡಿಯನ್ಸ್ ಜನರನ್ನು ಹಿಸ್ಪಾನಿಯೋಲ ಮತ್ತು ಕ್ಯೂಬದ ಚಿನ್ನದ ಗಣಿಗಳಲ್ಲಿ ದುಡಿಸಲು ಬಳಸಿಕೊಂಡರು. ಬ್ರಿಟಿಷರು ಬಂದು ನೆಲಸಿದ ಮೊದಲಲ್ಲಿ ಸ್ಪಾನಿಷರು ಅವರನ್ನು ವಿರೋಧಿಸಲಿಲ್ಲ. ಆದರೆ 1600ರ ಕೊನೆಯಲ್ಲಿ ಬ್ರಿಟಿಷ್ ನೆಲೆಗಳ ಮೇಲೆ ದಾಳಿ ಮಾಡಲಾರಂಭಿಸಿದರು. ಬಹಾಮಸಿನಲ್ಲಿ ವಸತಿ ಮಾಡಿಕೊಂಡಿದ್ದ ಕಡಲುಗಳ್ಳರು ಸಹ ಬ್ರಿಟಿಷರ ನೆಲೆಗಳ ಮೇಲೆ ದಾಳಿಮಾಡಿದ್ದುಂಟು. ಕೊನೆಗೆ 1717ರಲ್ಲಿ ಬಹಾಮಸ್ ಬ್ರಿಟಿಷರ ಒಂದು ವಸಾಹತಾಯಿತು. ವರ್ಸೈಲ್ಸ್ ಕೌಲಿನ ಪ್ರಕಾರ ಸ್ಪೇನ್ 1783ರಲ್ಲಿ ಬಹಾಮಸಿನ ಮೇಲಿನ ಹಕ್ಕನ್ನು ಬಿಟ್ಟು ಕೊಟ್ಟಿತು. ಅಮೆರಿಕದ ಕ್ರ್ರಾಂತಿ ಯುದ್ಧವಾದ ಬಳಿಕ (1775-33) ಬ್ರಿಟಿಷರಿಗೆ ನಿಷ್ಠರಾದ ಅನೇಕ ಮಂದಿ ಬಹಾಮಸಿಗೆ ಬಂದು ತಮ್ಮ ಗುಲಾಮರ ಸಹಾಯದಿಂದ ತೋಟಗಳನ್ನು ಮಾಡಿಕೊಂಡು ಅಲ್ಲಿ ನೆಲಸಿದರು. 1838ರಲ್ಲಿ ಬ್ರಿಟನ್ ಬಹಾಮಸಿನಲ್ಲಿ ಗುಲಾಮ ಪದ್ಧತಿಯನ್ನು ನಿಷೇಧಿಸಿತು. ಅಮೆರಿಕ ಅಂತರ್ಯುದ್ಧದ ಕಾಲದಲ್ಲಿ (1861-65) ಬಹಾಮಸ್ ಅಭಿವೃದ್ಧಿಯಾಯಿತು. 1964ರಲ್ಲಿ ಬ್ರಿಟನ್ ಬಹಾಮಸಿಗೆ ಅಂತರಿಕ ಸ್ವಾತಂತ್ರ್ಯ ನೀಡಿತು. 1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಕರಿಯರೇ ಹೆಚ್ಚು ಆರಿಸಿಬಂದು ಅವರ ಆಡಳಿತ ಸ್ಥಾಪಿತವಾಯಿತು. ಮುಂದೆ 1973 ಜುಲೈ 10ರಂದು ಬಹಾವಸ್ ಪೂರ್ಣ ಸ್ವತಂತ್ರವಾಯಿತು. ಅದೇ ವರ್ಷ ವಿಶ್ವಸಂಸ್ಥೆಯ ಸದಸ್ಯತ್ವವನ್ನೂ ಪಡೆಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ